ಹೇಸ್ಟಿಂಗ್ಸ್, ಮಾಕ್ರ್ವಿಸ್
1754-1826. ಭಾರತದ ಪ್ರಸಿದ್ಧ ಗೌರ್ನರ್ ಜನರಲ್ (1813-23). ಇವನ ಹೆಸರು ಅರ್ಲ್ ಆಫ್ ಮಾಯಿರ್. ಮಾಕ್ರ್ವಿಸ್ ಆಫ್ ಹೇಸ್ಟಿಂಗ್ಸ್ ಎಂಬುದು ಇವನ ಬಿರುದು. ಇವನಿಗೂ ವಾರೆನ್ ಹೇಸ್ಟಿಂಗ್‍ಗೂ ಯಾವುದೇ ಸಂಬಂಧವಿಲ್ಲ. ಲಾರ್ಡ್ ವೆಲ್ಲೆಸ್ಲಿಯ ಅನಂತರ ಈತ ಅಧಿಕಾರ ಸ್ವೀಕರಿಸಿದ. ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆ ಯಲ್ಲಿ ಇವನ ಆಡಳಿತ ಎರಡನೆಯ ಹಂತ. ಇವನು 60 ವರ್ಷದ ವೃದ್ಧನಾದರೂ ಅನೇಕ ಸೈನಿಕ ಕಾರ್ಯಾಚರಣೆಗಳನ್ನು ನಡೆಸಿ, ವೆಲ್ಲೆಸ್ಲಿ ಕೈಗೊಂಡಿದ್ದ ಕಾರ್ಯವನ್ನು ಪೂರ್ಣಗೊಳಿಸಿದ. ಇವನು 28 ಸೈನಿಕ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದ. ಯಾವ ಯುದ್ಧಗಳಲ್ಲೂ ಸೋಲು ಅನುಭವಿಸದೆ 120 ಕೋಟೆಗಳನ್ನು ವಶಪಡಿಸಿಕೊಂಡ. ನೇಪಾಲದ ಘೂರ್ಖರನ್ನೂ(1816), ಪಿಂಡಾರಿಗಳನ್ನೂ(1817) ಸದೆಬಡಿದ. ಇವನ ಸೈನಿಕ ಸಾಧನೆಗಳಲ್ಲಿ ಮುಖ್ಯವಾದುದು 3ನೆಯ ಮರಾಠಯುದ್ಧದಲ್ಲಿ ಮರಾಠರನ್ನು ಸೋಲಿಸಿ ಅವರ ಶಕ್ತಿಯನ್ನು ಸಂಪೂರ್ಣವಾಗಿ ನಾಶಗೊಳಿಸಿದ್ದು(1818). ಈತ ಸುಧಾರಣೆಗಳನ್ನು ಜಾರಿಗೊಳಿಸಿದ. ಜಾನ್ ಮಾಲ್ಕಾಮ್, ಥಾಮಸ್ ಮನ್ರೋ, ಮೌಂಟ್ ಸ್ಟೂಯರ್ಟ್, ಎಲ್ಫಿನ್‍ಸ್ಟನ್, ಚಾಲ್ರ್ಸ್ ಮೆಟ್ಕಾಫ್‍ರಂತಹ ನುರಿತ ಅಧಿಕಾರಿಗಳು ಇವನ ಯೋಜನೆಗಳನ್ನು ಯಶಸ್ವಿಗೊಳಿಸಿದರು. ಪೇಶ್ವೆಯಿಂದ ವಶಪಡಿಸಿಕೊಂಡ ಪ್ರಾಂತಗಳ ಬಗ್ಗೆ ಎಲ್ಫಿನ್ ಸ್ಟನ್ ತೋರಿದ ಶಾಂತಿ, ಸಮಾಧಾನ, ಮದರಾಸಿನಲ್ಲಿ ಮನ್ರೋ ಜಾರಿಗೆ ತಂದ ರೈತ್ವಾರಿ ಪದ್ಧತಿ ಇವನ ಆಡಳಿತಕ್ಕೆ ಕೀರ್ತಿ ತಂದವು. ಅನೇಕ ರಚನಾತ್ಮಕ ಕಾರ್ಯಗಳನ್ನು ಕೈಗೊಂಡ. ಬಂಗಾಲದಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸಿ, ನಾಗರಿಕ ಮೊಕದ್ದಮೆಗಳ ವಿಧಾನವನ್ನು ಸರಳಗೊಳಿಸಿದ. ಲಾರ್ಡ್ ಕಾರ್ನ್‍ವಾಲೀಸ್ ಜಾರಿಗೊಳಿಸಿದ್ದ ಕಾರ್ಯಾಂಗ ಮತ್ತು ನ್ಯಾಯಾಂಗ ಅಧಿಕಾರಿಗಳ ಪ್ರತ್ಯೇಕತೆಯನ್ನು ರದ್ದುಪಡಿಸಿದ. ರೈತರನ್ನು ಜಮೀನುದಾರರ ಹಿಡಿತದಿಂದ ಬಿಡಿಸಿದ. ಶಿಕ್ಷಣ ಕ್ಷೇತ್ರವನ್ನು ಪ್ರೋತ್ಸಾಹಿಸಿ ಅನೇಕ ಶಾಲೆಗಳನ್ನು ಸ್ಥಾಪಿಸಿದ. ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ನೀಡುವ ಪದ್ಧತಿಯನ್ನು ಜಾರಿಗೊಳಿಸಿದ. ಪತ್ರಿಕೆಗಳ ಮೇಲಿದ್ದ ನಿರ್ಬಂಧ ತೆಗೆದುಹಾಕಿದ. ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸಿದ. ಲಾರ್ಡ್ ವೆಲ್ಲೆಸ್ಲಿ ಪ್ರಾರಂಭಿಸಿದ್ದ ಕಾರ್ಯಗಳನ್ನು ಪೂರ್ಣಗೊಳಿಸಿದ ಈತ ವೆಲ್ಲೆಸ್ಲಿ ಮದರಾಸು ಆಧಿಪತ್ಯ ರಚಿಸಿ ಪ್ರಸಿದ್ಧನಾದಂತೆ ಬೊಂಬಾಯಿ ಆಧಿಪತ್ಯ ರಚಿಸಿ ಪ್ರಸಿದ್ಧನಾದ.									
		(ಡಿ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ